ತಿಪ್ಪೆಗಳು ಹಾಗೂ ಪರಿಸರ ಮತ್ತು ಆರ್ಥಿಕತೆಯ ಮೇಲೆ ಅವುಗಳ ಪರಿಣಾಮ


Reading Time: 3 minutes

ನಮ್ಮಲ್ಲಿ ಪ್ರತಿಯೊಬ್ಬರೂ ಪ್ರತಿದಿನ ಕಸವನ್ನು ಉತ್ಪಾದಿಸುತ್ತೇವೆ.

ಉದಾಹರಣೆಗೆ ಆಹಾರವನ್ನೇ ತೆಗೆದುಕೊಳ್ಳಿ. ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡುವಿರೇ? ತಿನ್ನಲು-ಸಿದ್ಧವಾಗಿರುವ ಆಹಾರವನ್ನು ಸೂಪರ್‌ಮಾರ್ಕೆಟಿನಲ್ಲಿ ಕೊಳ್ಳುವಿರೇ? ರೆಸ್ಟಾರೆಂಟಿನಲ್ಲಿ ತಿನ್ನುವಿರೇ? ಮನೆಯಲ್ಲಿ ಅಡುಗೆ ಮಾಡುವಿರೇ? ಇವೆಲ್ಲವೂ ಕಸವನ್ನು ಉತ್ಪಾದಿಸುತ್ತವೆ. ಅದು ತರಕಾರಿಯ ಸಿಪ್ಪೆಗಳಾಗಿರಬಹುದು, ಪ್ಯಾಕ್ ಮಾಡಿದ ಪೊಟ್ಟಣಗಳಾಗಿರಬಹುದು, ಇಲ್ಲವೇ ಉಳಿದ ಊಟವಾಗಿರಬಹುದು. ಏನೇ ಇರಲಿ ಕಸವಂತೂ ಉತ್ಪಾದನೆಯಾಗುತ್ತದೆ. 

ಇದು ಕೇವಲ ಊಟದ ಕುರಿತಾಗಿದೆ.

ಕಸವನ್ನು ಉತ್ಪಾದಿಸಲು ಇನ್ನೂ ಹಲವಾರು ಮೂಲಗಳಿವೆ. ಪ್ಲಾಸ್ಟಿಕ್/ಕಾರ್ಡ್‌ಬೋರ್ಡ್/ಥರ್ಮಕೋಲ್/ಸ್ಟೈರೋಫೋಮ್ ಪ್ಯಾಕೇಜಿಂಗ್, ಹಳೆ ನ್ಯೂಸ್‌ಪೇಪರ್, ನಿಮ್ಮ ಹೂದೋಟದಲ್ಲಿ ಉದುರಿಬಿದ್ದ ಎಲೆಗಳು, ನೀವು ಹತ್ತಿಸುವ ಬೆಂಕಿಕಡ್ಡಿ, ಉಪಯೋಗಿಸಿದ ಮಕ್ಕಳ ಡೈಪರ್‌ಗಳು, ಫೇಸ್ ಟಿಶ್ಯು, ಹಳೆಯ ಇಲ್ಲವೇ ಹರಿದ ಬಟ್ಟೆಗಳು, ಬಳಸಿದ ರೇಜರ್ ಬ್ಲೇಡ್‌ಗಳು… ಇವೆಲ್ಲವೂ ಕಸವಾಗಿ ಹೋಗುತ್ತವೆ. 

ಒಂದು ದಿನದಲ್ಲಿ ನೀವು ಉತ್ಪಾದಿಸುವ ಕಸವನ್ನು ಒಮ್ಮೆ ಊಹಿಸಿಕೊಳ್ಳಿ. ಅದನ್ನೀಗ ಬೆಂಗಳೂರಿನ ಜನಸಂಖ್ಯೆಯೊಂದಿಗೆ ಗುಣಿಸಿ ನೋಡಿ, ಅಂದರೆ 13 ಮಿಲಿಯನ್ ಎಂದು ಅಂದಾಜಿಸಿರುವ ಬೆಂಗಳೂರಿನ ಜನಸಂಖ್ಯೆಯೊಂದಿಗೆ ಗುಣಿಸಿ.

ಇದನ್ನು ಕೇಳಿದರೆ ಹೆದರಿಕೆಯಾಗುವುದಿಲ್ಲವೇ? 

ಈ ಕಸವೆಲ್ಲಾ ಎಲ್ಲಿಗೆ ಹೋಗುವುದು?

ಮನೆಯ ಕಸವನ್ನು ಒಣಕಸ, ಹಸಿಕಸ ಹಾಗೂ ಅಪಾಯಕಾರಿ ಕಸವೆಂದು ವಿಂಗಡಿಸಬಹುದು. ಈ ಪ್ರತಿಯೊಂದು ಬಗೆಯ ಕಸವನ್ನು ಬೇರೆ ಬೇರೆಯಾಗಿ ವಿಲೇವಾರಿ ಮಾಡಬೇಕು. ಹಸಿಕಸವನ್ನು ಗೊಬ್ಬರವನ್ನಾಗಿಸಬಹುದು ಹಾಗೆಯೇ ಒಣಕಸವನ್ನು ಮರುಬಳಕೆ ಮಾಡಬಹುದು. ಆದರೆ ಕಸವನ್ನು ವಿಂಗಡಿಸದೇ ವಿಲೇವಾರಿ ಮಾಡಿದರೆ, ಅದನ್ನು ಬೆರಕೆ ಕಸ ಎಂದು ಗುರುತಿಸುತ್ತಾರೆ. ಇಷ್ಟೊಂದು ದೊಡ್ಡ ಪ್ರಮಾಣದ ಬೆರಕೆ ಕಸವನ್ನು ಸಂಸ್ಕರಿಸುವ ಸಾಮರ್ಥ್ಯ ಈ ನಗರದಲ್ಲಿ ಇಲ್ಲದಿರುವುದರಿಂದ, ಈ ಕಸವನ್ನೆಲ್ಲಾ ನಗರದ ಸುತ್ತಲಿರುವ ಜಾಗದಲ್ಲಿ ಹಾಕಿ ಅದನ್ನು ತಿಪ್ಪೆಯಾಗಿಸುತ್ತಾರೆ.

 

Waste generated in Bangalore

ತಿಪ್ಪೆಗುಂಡಿಗಳ ಕುರಿತು

ಕಸವನ್ನು ವಿಲೇವಾರಿ ಮಾಡಲು ಇರುವ ತುಂಬಾ ಹಳೆಯದಾದ ಹಾಗೂ ತೀರಾ ಸಾಮಾನ್ಯವಾದ ದಾರಿಯೇ ತಿಪ್ಪೆ. ಸಾಮಾನ್ಯವಾಗಿ ಇವು, ನಗರ ಪಾಲಿಕೆಗಳಲ್ಲಿ ಉತ್ಪಾದನೆಯಾಗುವ ಕಸವನ್ನು ಎಸೆಯಲು ನಿಗದಿಯಾಗಿರುವ, ಯಾವುದಕ್ಕೂ ಬೇಡದ ಕಲ್ಲುಗಣೆಗಳು ಇಲ್ಲವೇ ಬಯಲು ಪ್ರದೇಶಗಳಾಗಿರುತ್ತವೆ. ಕೆಲವೊಮ್ಮೆ ಕಸವನ್ನು ದಿನಕ್ಕೊಮ್ಮೆ, ವಾರಕ್ಕೊಮ್ಮೆ ಇಲ್ಲವೇ ತಿಂಗಳಿಗೊಮ್ಮೆ ಹೂಳಲಾಗುತ್ತದೆ. ಇನ್ನೂ ಕೆಲವೊಮ್ಮೆ ಇದನ್ನು ಹಾಗೆಯೇ ರಾಶಿ ಮಾಡಿ ಬಿಟ್ಟುಬಿಡಲಾಗುತ್ತದೆ.

ಕೆಲವು ದೇಶಗಳಲ್ಲಿ, ಈ ತಿಪ್ಪೆಗಳು ವೈಜ್ಙಾನಿಕವಾಗಿ ವಿನ್ಯಾಸ ಮಾಡಲಾದ ಹಾಗೂ ಸಮಗ್ರ ಕಸ ನಿರ್ವಹಣೆಯ ಭಾಗವಾಗಿ ಚೆನ್ನಾಗಿ ನಿರ್ವಹಿಸಲಾದ ಜಾಗಗಳಾಗಿರುತ್ತವೆ. ಆದಾಗ್ಯೂ, ಹಲವು ತಿಪ್ಪೆಗಳನ್ನು ಸರಿಯಾಗಿ ನಿರ್ವಹಿಸಿರುವುದಿಲ್ಲ. ಇದು ಪರಿಸರ ಹಾಗೂ ಸಾಮಾಜಿಕ-ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.  

ತಿಪ್ಪೆಯಿಂದ ಪರಿಸರಕ್ಕೆ ಆಗುವ ಪರಿಣಾಮಗಳು

ಗಾಳಿ: ತಿಪ್ಪೆಗೆ ಹೋಗುವ ಬೆರಕೆ ಕಸದಲ್ಲಿ ದೊಡ್ಡ ಪ್ರಮಾಣದ ಕೊಳೆಯಬಲ್ಲ ಕಸವಿರುತ್ತದೆ. ಇಂತಹ ಒಂದು ಆರ್ಗ್ಯಾನಿಕ್ ವಸ್ತು ಸ್ವಾಭಾವಿಕವಾಗಿ ಕೊಳೆಯುತ್ತಾ ಹೋದಂತೆ ಮೀಥೇನ್ ಹಾಗೂ ಕಾರ್ಬನ್ ಡೈಯಾಕ್ಸೈಡ್‌ ಅನ್ನು ಹೊರಹಾಕುತ್ತದೆ. ಮೀಥೇನ್ ಒಂದು ಹಸಿರುಮನೆ ಗಾಳಿಯಾಗಿದ್ದು ಕಾರ್ಬನ್ ಡೈಯಾಕ್ಸೈಡ್‌ಗಿಂತ 30 ಪಟ್ಟು ಹೆಚ್ಚು ಬಿಸಿಯನ್ನು ಭೂಮಿಯ ವಾತಾವರಣದಲ್ಲಿ ಹಿಡಿದಿಡುತ್ತದೆ, ಆ ಮೂಲಕ ಜಾಗತಿಕ ತಾಪಮಾನಕ್ಕೆ ಇದು ದೊಡ್ಡ ಕಾರಣವಾಗುತ್ತದೆ. ತಿಪ್ಪೆಯಿಂದ, ಕಡಿಮೆ ಸಾಂದ್ರತೆಯ ಇತರೆ ಗಾಳಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಹೊರಬರುತ್ತವೆ; ಇವುಗಳಲ್ಲಿ ಕೆಲವು ವಿಷಗಾಳಿಗಳು, ಮನುಷ್ಯರನ್ನೂ ಸೇರಿಸಿ ಹಲವು ಪ್ರಾಣಿಗಳಿಗೆ ವಿಷಕಾರಿಯಾಗಿವೆ.  

ನೆಲನೀರು: ಕೆಲವೊಂದು ಕಸದಲ್ಲಿ ತೇಲಾಡುತ್ತಿರುವ ಹಾಗೂ ಕರಗಬಲ್ಲ ಆರ್ಗ್ಯಾನಿಕ್ ಹಾಗೂ ಇನ್‌ಆರ್ಗ್ಯಾನಿಕ್ ವಸ್ತುಗಳು ಇರುತ್ತವೆ. ಇದರಲ್ಲಿ ಕೆಲವು ಕಸ ಕೊಳೆಯುತ್ತಿರುವಾಗ ಉತ್ಪಾದನೆಯಾಗುತ್ತವೆ. ಹೀಗಿರುವ ಕಸದ ರಾಶಿಯ ಮೂಲಕ ಮಳೆಯ ನೀರು ಹರಿದು, ಸೋಸಿಹೋದಾಗ, ಈ ರಾಸಾಯನಿಕಗಳನ್ನು ಮಳೆನೀರು ಸೇರಿಸಿಕೊಂಡು ಕೊಳೆನೀರಾಗುತ್ತದೆ. ಈ ಕೊಳೆನೀರಿನಲ್ಲಿ ಅಮೋನಿಯಾ, ವಿಷಕಾರಿ ಲೋಹದ ಅಂಶಗಳು ಹಾಗೂ ರೋಗಕಾರಕಗಳು ಇರುತ್ತವೆ. ಹಾಗಾಗಿ, ಈ ಕೊಳೆನೀರು ಅಪಾಯಕಾರಿ ಹಾಗೂ ಕಾರ್ಸಿನೋಜೆನಿಕ್ ವಸ್ತುವಾಗಿ ಮಾರ್ಪಡುತ್ತದೆ. 

ಈ ಕೊಳೆನೀರು ಮಣ್ಣಿನಲ್ಲಿ ಸೋಸಿ ಹೋಗಿ, ನೆಲದ ನೀರನ್ನು ಮಲಿನಗೊಳಿಸುತ್ತದೆ. ಹೀಗೆ ಮಲಿನಗೊಂಡ ವಿಷಯುಕ್ತ ನೀರು ಎಲ್ಲಾ ನೈಸರ್ಗಿಕ ನೀರಿನ ಸೆಲೆಗಳಿಗೆ ಸೇರುತ್ತದೆ. ಅಂತಹ ನೀರಿನ ಸೆಲೆಗಳನ್ನು ಅವಲಂಬಿಸಿರುವ ಗಿಡಗಳು ಹಾಗೂ ಪ್ರಾಣಿಗಳ ಮೇಲೆ ಇದು ಪರಿಣಾಮ ಬೀರುತ್ತದೆ 

ಮಣ್ಣಿನ ಫಲವತ್ತತೆ: ತಿಪ್ಪೆಯಲ್ಲಿರುವ ಕೊಳೆಯುವ ವಸ್ತು ಹಾಗೂ ವಿಷಕಾರಿ ಅಂಶಗಳು ಅದರ ಸುತ್ತಲಿನದ ಪ್ರದೇಶದ ಮಣ್ಣಿನ ಗುಣಮಟ್ಟದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಈ ಬೆಳವಣಿಗೆ ವ್ಯವಸಾಯಕ್ಕೆ ಒಳ್ಳೆಯದಲ್ಲ. ತಿಪ್ಪೆ ಇರುವ ಪ್ರದೇಶದಲ್ಲಿ ಗಿಡಮರಗಳ ಬೆಳವಣಿಗೆ ನಿಂತುಹೋಗಬಹುದು, ಅದರಿಂದಾಗಿ ಜೀವವೈವಿಧ್ಯತೆಯ ಮೇಲೆ ಪೆಟ್ಟುಬೀಳಬಹುದು.

ಆಹಾರ ಸರಪಳಿ: ಆ ತಿಪ್ಪೆಯ ರಾಶಿಯಲ್ಲಿ ಹೆಚ್ಚಿನ ಸಂಖ್ಯೆಯ ಇಲಿ, ಹೆಗ್ಗಣ, ಕಾಗೆ, ನಾಯಿ, ರಣಹದ್ದು ಹಾಗೂ ಇತರೆ ಹೇಸಿಗೆ ತಿನ್ನುವ ಪ್ರಾಣಿಗಳನ್ನು ನೋಡಬಹುದು. ಆ ಪ್ರದೇಶದಲ್ಲಿರುವ ಮೂಲ ಪ್ರಾಣಿ ಸಂಕುಲದ ಜಾಗದಲ್ಲಿ ಕೊನೆಗೆ ಈ ಪ್ರಾಣಿಗಳು ಬಂದು ಬಿಡಬಹುದು. ಇದು ಅಲ್ಲಿನ ಪರಿಸರ ಸಮತೋಲನವನ್ನು ಕೆಡಿಸುವುದಲ್ಲದೇ, ಆ ಪ್ರದೇಶದ ಸ್ಥಳೀಯ ಗಿಡಗಳು ಹಾಗೂ ಪ್ರಾಣಿಗಳನ್ನು ಅವನತಿಯತ್ತ ದೂಡಿಬಿಡುವುದು.

ಸಾಮಾಜಿಕ-ಆರ್ಥಿಕತೆಯ ಮೇಲಾಗುವ ಪರಿಣಾಮಗಳು

ಆರೋಗ್ಯ: ತಿಪ್ಪೆಗಳು ಹಲವು ಸೂಕ್ಷ್ಮಜೀವಿಗಳ ಹಾಗೂ ಅವನ್ನು ಸಾಗಿಸುವ ಸೊಳ್ಳೆಗಳಂತಹ ಕೀಟಗಳ ಆವಾಸ ಸ್ಥಾನವಾಗುತ್ತವೆ. ಹಾಗಾಗಿ, ಈ ತಿಪ್ಪೆಯ ಸುತ್ತಲಿನ ಪ್ರದೇಶದಲ್ಲಿ ವಾಸಿಸುವರ ಆರೋಗ್ಯಕ್ಕೆ ಅಪಾಯಗಳಿರುತ್ತವೆ. ಕೊಳೆನೀರಿನಲ್ಲಿರುವ ವಿಷಕಾರಿ ಲೋಹದ ಅಂಶಗಳು ಹಾಗೂ ಕಾರ್ಸಿನೋಜೆನ್‌ಗಳು ಸೋಸಿಹೋಗಿ ಅಂತರ್ಜಲವನ್ನೂ ತಲುಪಿ, ಈ ಪ್ರದೇಶದಲ್ಲಿ ವಾಸಿಸುವ ಪ್ರಾಣಿಗಳು ಹಾಗೂ ಮನುಷ್ಯರಿಗೆ ಇನ್ನೂ ಹೆಚ್ಚಿನ ಅಪಾಯವನ್ನು ತಂದೊಡ್ಡುತ್ತವೆ.   

ಜಾಗದ ಬೆಲೆ: ತಿಪ್ಪೆಯಲ್ಲಿರುವ ಕಸ ಕೊಳೆತು ಉತ್ಪಾದನೆಯಾಗುವ ಮೀಥೇನ್ ಗಾಳಿಯು ಸುತ್ತಲಿನ ಪ್ರದೇಶಕ್ಕೆ ಕೆಟ್ಟ ವಾಸನೆಯನ್ನು ಹರಿಸುತ್ತದೆ. ತಿಪ್ಪೆಲ್ಲಿರುವ ಕಸ ಸರಿಯಾಗಿ ಮರುಬಳಕೆಯಾಗದೇ ಇರುವುದರಿಂದ ಇಂತಹ ಕೊಳಕುಗಾಳಿ ಸುತ್ತಲಿನ ಪರಿಸರದಲ್ಲಿ ಬೆರೆತು ಹೋಗುವುದು. ತಿಪ್ಪೆಗಳಿಗೆ ಬೆಂಕಿ ಬೀಳುವುದು ಕೂಡ ಸಾಮಾನ್ಯ ಸಂಗತಿಯಾಗಿದೆ, ಅದರ ಸುತ್ತ ವಾಸ ಮಾಡುತ್ತಿರುವವರ ಬದುಕಿನ ಮೇಲೆ ಇದು ಪರಿಣಾಮ ಬೀರುತ್ತದೆ. ಇವೆಲ್ಲದರಿಂದ, ತಿಪ್ಪೆಯ ಸುತ್ತ 3 ಕಿಲೋಮೀಟರ್ ಒಳಗಿರುವ ಜಾಗ ಹಾಗೂ ಮನೆಗಳ ಬೆಲೆಯ ಮೇಲೆ ಇದು ಪ್ರತಿಕೂಲ ಪರಿಣಾಮ ಬೀರುತ್ತದೆ.

ದೂರಗಾಮಿ ಪರಿಣಾಮಗಳು

ನಗರ ಪ್ರದೇಶಗಳಲ್ಲಿ ಜಾಗ ಹಾಗೂ ನಿವೇಶನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ನೋಡಿದರೆ, ಮುಂದಿನ ಕೆಲವೇ ವರ್ಷಗಳಲ್ಲಿ ತಿಪ್ಪೆಗುಂಡಿಗಳನ್ನು ಮುಚ್ಚಿ ಸೈಟುಗಳಾಗಿ ಮಾರ್ಪಡಿಸುವುದನ್ನು ಯಾರಿಂದಲೂ ತಡೆಯಲು ಸಾಧ‌್ಯವಿಲ್ಲ. ಜಯನಗರ ಟಿ-ಬ್ಲಾಕ್ ಹಾಗು ಕಾಟನ್‌ಪೇಟೆಯಲ್ಲಿರುವ ಬಿನ್ನಿಮಿಲ್ಸ್‌ನ ಹಿಂಬದಿಯ ಪ್ರದೇಶ ಒಂದು ಕಾಲದಲ್ಲಿ ತಿಪ್ಪೆಗಳಾಗಿದ್ದವು, ಇಂದು ಅಲ್ಲಿ ಮನೆಗಳು ಹಾಗೂ ವ್ಯಾಪಾರಿ ಮಳಿಗೆಗಳು ರಾರಾಜಿಸುತ್ತಿವೆ. ತಿಪ್ಪೆಯ ಪರಿಣಾಮಗಳನ್ನು ಈಗಲೂ ಇಲ್ಲಿ ಕಾಣಬಹುದು, ಏಕೆಂದರೆ ಈ ಪ್ರದೇಶದ ಮಣ್ಣು ಹಾಗು ನೀರಿನಲ್ಲಿ ಅಪಾಯಕಾರಿ ರಾಸಾಯನಿಕಗಳ ಸುಳಿವುಗಳಿವೆ.

ಬೆಂಗಳೂರಿಗೆಂದು ನಿಗದಿಮಾಡಿರುವ ತಿಪ್ಪೆಗುಂಡಿಗಳು ಬಿರುಸಾಗಿ ಭಯ ಬೀಳಿಸುವಂತೆ ತುಂಬುತ್ತಿವೆ. ಕಸದ ವಿಲೇವಾರಿಗೆ ಹಲವಾರು ದೇಶಗಳು ವೈಜ್ಞಾನಿಕವಾದ ಹಾಗೂ ವ್ಯವಸ್ಥಿತವಾದ ವಿಧಾನಗಳನ್ನು ಪಾಲಿಸಲು ಮುಂದಾಗುತ್ತಿದ್ದರೆ, ನಾವಿನ್ನು ತಿಪ್ಪೆಗುಂಡಿಗಳಲ್ಲೇ ಸಿಕ್ಕಿಹಾಕಿಕೊಂಡಿದ್ದೇವೆ.

ತಿಪ್ಪೆಯಲ್ಲೇ ಕಸದ ಕೊನೆಯಾಗುತ್ತದೆ ಎಂದುಕೊಂಡು ನಾವು ಇದರ ಬಗ್ಗೆ ಚಿಂತೆ ಮಾಡಲು ಹೋಗೇ ಇಲ್ಲ. ಆದರೆ ತಿಪ್ಪೆಗಳನ್ನು ಸರಿಯಾಗಿ ವಿನ್ಯಾಸ ಮಾಡದೇ ಹಾಗೂ ನಿರ್ವಹಿಸದೇ ಹೋದರೆ, ಮೂಲರೂಪದ ಕಸದಿಂದ ಆಗುವ ಅಪಾಯಕ್ಕಿಂತಲೂ ಹೆಚ್ಚಿನ ಅಪಾಯವಾಗುವುದು ಎಂದು ಹಲವು ಸಂಶೋಧನೆಗಳು ತೋರಿಸಿಕೊಟ್ಟಿವೆ. ಇದು ಪರಿಸರ ಹಾಗೂ ಆರೋಗ್ಯವನ್ನು ಹಾಳುಮಾಡುವುದಷ್ಟೇ ಅಲ್ಲದೇ ಆರ್ಥಿಕತೆಯ ಮೇಲೂ ಕೆಡುಕಿನ ಪರಿಣಾಮ ಬೀರುವುದು. 

ನೀವೇನು ಮಾಡಬಹುದು?

ತಿಪ್ಪೆಗಳನ್ನು ಸರಿಯಾಗಿ ನಿರ್ವಹಿಸುವುದು ತುಂಬಾ ಮುಖ್ಯ. ಕಸವನ್ನು ತಿಪ್ಪೆಗೆ ಹಾಕುವ ಮೊದಲು ಅದನ್ನು ಸರಿಯಾಗಿ ಸಂಸ್ಕರಿಸಬೇಕು. ತಿಪ್ಪೆಯ ಬುಡದಲ್ಲಿ ಕೊಳೆನೀರು ನೆಲದಡಿಗೆ ಸೋಸಿ ಹೋಗದಂತೆ ತಡೆಯುವ ವ್ಯವಸ್ಥೆಗಳಿರಬೇಕು. ಕಸದಿಂದ-ಶಕ್ತಿಯನ್ನು ಸೆರೆಹಿಡಿಯುವುದು, ಗಾಳಿಯಿರದೆ ಕರಗುವಿಕೆ ಹಾಗೂ ಅತಿಯಾದ ಬಿಸಿಯಲ್ಲಿ ಕೊಳೆಸುವುದು ಅಂದರೆ ಪೈರೋಲಿಸಿಸ್‌ನಂತ ಕೆಲವು ಬದಲಿ ವ್ಯವಸ್ಥೆಗಳನ್ನು ನಾವು ರೂಪಿಸಬಹುದು. 

ಆದರೆ ಈ ಎಲ್ಲಾ ಪರಿಹಾರಗಳನ್ನು ಅಳವಡಿಸಲು ಸಾಧ್ಯವಾಗುವುದು ಸರ್ಕಾರದ ಕೈಯಲ್ಲಿ ಮಾತ್ರ.

ತಿಪ್ಪೆಗಳಿಂದಾಗುವ ಕೆಡುಕನ್ನು ಕಡಿಮೆಮಾಡಲು ನಾಗರಿಕರಾಗಿ ನಾವೂ ಕೆಲವು ಕೆಲಸಗಳನ್ನು ಮಾಡಬಹುದು. ದಿನದಲ್ಲಿ ಉತ್ಪಾದನೆಯಾಗುವ ಕಸವನ್ನು ಕಡಿಮೆ ಮಾಡುವುದು ಅಂತಹ ಕೆಲಸಗಳಲ್ಲಿ ಒಂದು. ಮನೆಯಲ್ಲೇ ಕಸವನ್ನು ಬೇರೆ ಮಾಡಿ ಬೆರಕೆ ಕಸ ತಿಪ್ಪೆಗೆ ಹೋಗದಂತೆ ತಡೆಯುವುದು ಮತ್ತೊಂದು ದಾರಿ. ನಿಮಗೆ ಸಾಧ್ಯವಾದರೆ ಹಸಿಕಸವನ್ನು ಮನೆಯಲ್ಲೇ ಗೊಬ್ಬರವಾಗಿಸಿ, ಪ್ಲಾಸ್ಟಿಕ್ ಹಾಗೂ ಪೇಪರ್ ಕಸವನ್ನು ಮರುಬಳಕೆಯ ಕೇಂದ್ರಗಳಿಗೆ ಕಳುಹಿಸಿದರೆ ಹೆಚ್ಚಿನ ಬೆರಕೆ ಕಸ ತಿಪ್ಪೆ ಸೇರುವುದನ್ನು ತಪ್ಪಿಸಬಹುದಾಗಿದೆ. 

ನಮ್ಮ ಕಸ ನಮ್ಮ ಹೊಣೆ ಎಂಬುದನ್ನು ನಾವು ತಿಳಿಯುವುದು ಮುಖ್ಯ. ನಮ್ಮ ಕಸದ ಹೊಣೆಗಾರಿಕೆಯನ್ನು ನಾವು ಹೊರದಿದ್ದರೆ, ಅದು ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಮೇಲೆಯೇ ಕೆಟ್ಟ ಪರಿಣಾಮ ಬೀರುವುದು. ತಿಪ್ಪೆಗಳು ಈಗಾಗಲೇ ತುಂಬಿತುಳುಕುತ್ತಿವೆ. ಅವಕ್ಕೆ ಇನ್ನೂ ತುರುಕುವುದು ಬೇಡ.

ಇಂದೇ ಕಸವನ್ನು ವಿಂಗಡಿಸಲು ಶುರುಮಾಡಿ.

 

Would you like to receive more articles like this?

Leave a Reply

Your email address will not be published. Required fields are marked *

4 × two =

ಇತ್ತೀಚೆಗೆ ಸೇರಿಸಿದ ವಿಷಯ

ಶೂನ್ಯ-ತ್ಯಾಜ್ಯ ಆಚರಣೆಗಳ ಸುತ್ತಲಿನ ಕಟ್ಟುಕಥೆಗಳನ್ನು ಉದ್ದೇಶಿಸಿ


Reading Time: 2 minutes

ಸಂಪ್ರದಾಯಗಳು ಮತ್ತು ಸಂಸ್ಕೃತಿಗಳ ಪಾಟ್‌ಪುರಿಯಾಗಿರುವ ಭಾರತವು ನಮ್ಮ ಬಹುಸಂಖ್ಯೆಯ ಹಬ್ಬಗಳನ್ನು ಆಡಂಬರದಿಂದ ಆಚರಿಸುತ್ತದೆ. ಕುಟುಂಬ, ಸ್ನೇಹಿತರು ಮತ್ತು ಸಮುದಾಯಗಳು ಒಟ್ಟಿಗೆ ಸೇರುವ ಸಂತೋಷದಾಯಕ ಸಂದರ್ಭಗಳು ಅವು. ಆದ್ದರಿಂದ, ನಾವು ಅದನ್ನು ಯಾವಾಗಲೂ ಭವ್ಯವಾಗಿ ಮಾಡಿದ್ದೇವೆ. ಈ ಸಂಪ್ರದಾಯಗಳು ಆಧುನಿಕ ಯುಗಕ್ಕೆ ತಕ್ಕಂತೆ ತಲೆಮಾರುಗಳ ಮೂಲಕ ವಿಕಸನಗೊಂಡಿವೆ. ದುರದೃಷ್ಟವಶಾತ್, ನಮ್ಮ ಆಚರಣೆಗಳಿಗೆ ನಾವು ಸೇರಿಸಿದ ಆಧುನಿಕ ಸ್ಪರ್ಶವು…

eco-friendly events KReate zero-waste sustainable events zero-waste celebrations zero-waste events

0 Comments

ತ್ಯಾಜ್ಯನೀರಿನ ಮರುಬಳಕೆ – ಭವಿಷ್ಯಕ್ಕಾಗಿ ಹೂಡಿಕೆ (ಭಾಗ 2)


Reading Time: 3 minutes

ಪುನಃ ಪಡೆದುಕೊಂಡ ನೀರಿನ ಪ್ರಾಮುಖ್ಯತೆಯನ್ನು ಈಗ ನೀವು ತಿಳಿದಿರುವಿರಿ, ತ್ಯಾಜ್ಯನೀರಿನ ಮರುಬಳಕೆಗೆ ಅನುಕೂಲಕರವಾದ ಭಾರತದಾದ್ಯಂತದ ವಿವಿಧ ನೀತಿಗಳು ಮತ್ತು ಉಪಕ್ರಮಗಳನ್ನು ನೋಡೋಣ. ಭಾರತದಲ್ಲಿ ತ್ಯಾಜ್ಯನೀರಿನ ಸಂಸ್ಕರಣಾ ನೀತಿಗಳು 1974 ರ ನೀರು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆಯು ಭಾರತದಲ್ಲಿ ತ್ಯಾಜ್ಯನೀರಿನ ಸಂಸ್ಕರಣೆಯನ್ನು ಬೆಂಬಲಿಸುವ ಮೊದಲ ನೀತಿಯಾಗಿದೆ. ಇದು ಜಲಮೂಲಗಳಿಗೆ ಕೈಗಾರಿಕೆಗಳ ಮಾಲಿನ್ಯಕಾರಕಗಳ ವಿಸರ್ಜನೆಯನ್ನು  ನಿರ್ಬಂಧಿಸುತ್ತದೆ….

Waste water Water Conservation

0 Comments

ಭಾರತೀಯ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ನಮ್ಮ ರೈತರಿಗೆ ಅಧಿಕಾರ ನೀಡಿ


Reading Time: 4 minutes

ಭಾರತವು ಬಾಳೆಹಣ್ಣು, ಮಾವು, ಪಪ್ಪಾಯಿ ಮತ್ತು ಪೇರಳೆಗಳಂತಹ ಅನೇಕ ತಾಜಾ ಹಣ್ಣುಗಳು, ಕಡಲೆ ಮತ್ತು ಒಕ್ರಾ ತರಕಾರಿಗಳು, ಹಾಲು, ಮೆಣಸಿನಕಾಯಿ, ಕಾಳುಮೆಣಸು ಮತ್ತು ಶುಂಠಿಯಂತಹ ಪ್ರಮುಖ ಮಸಾಲೆಗಳು, ಸೆಣಬಿನಂತಹ ನಾರಿನ ಬೆಳೆಗಳು, ರಾಗಿ ಮತ್ತು ಕ್ಯಾಸ್ಟರ್ ಬೀಜಗಳನ್ನು ಉತ್ಪಾದಿಸುವಲ್ಲಿ ವಿಶ್ವದ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ. ನಾವು ಗೋಧಿ ಮತ್ತು ಭತ್ತದ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. ನಾವು…

farmer empowerment Indian economy Indian farmers

0 Comments