ನಮ್ಮ ಊರು, ಬೆಂಗಳೂರಿನಲ್ಲಿ ನೀರಿನ ಮೂರು ಮೂಲಗಳಿವೆ.
- ಕಾವೇರಿ ನದಿ
- ಅಂತರ್ಜಲ
- ಉಳಿದಿರುವ ಕೆರೆಗಳು
- ಮಳೆ ನೀರು
ಪ್ರತಿ ದಿನ ಸುಮಾರು 1350 ಮಿಲಿಯನ್ ಲೀಟರ್ ಅಷ್ಟು ನೀರು, ಕಾವೇರಿ ನೀರು ಸರಬರಾಜು ಯೋಜನೆಯಿಂದ ಬರುತ್ತದೆ. ಇದು 8.5 ಮಿಲಿಯನ್ ಜನರಿಗೆ ಸಾಕಾಗುವುದು.
ಆದರೂ ನೀರಿನ ದೊಡ್ಡ ಕೊರತೆ ಇದೆ.
1970 ರ ದಶಕದಲ್ಲಿ ಬೋರ್ವೆಲ್‌ಗಳು ಜನಪ್ರಿಯವಾದವು. ಸದ್ಯಕ್ಕೆ, 3.65 ಲಕ್ಷ ನೋಂದಣಿ ಹೊಂದಿರುವ ಬೋರೆವೆಲ್‌ಗಳಿವೆ. ಅಂತರ್ಜಲ ಮಟ್ಟ ಕುಸಿದು, ಕೆಲವು ಪ್ರದೇಶಗಳಲ್ಲಿ 1500 ಅಡಿಗಳವರೆಗೂ ಕೊರೆದಿರುವ ಬಹಳಷ್ಟು ಬೋರೆವೆಲ್‌ಗಳು ಬತ್ತಿವೆ ಅಥವಾ ಕುಡಿಯಲು ಯೋಗ್ಯವಲ್ಲದ ನೀರನ್ನು ನೀಡುತ್ತಿವೆ. ಅಂತರ್ಜಲ ಮಟ್ಟವನ್ನು ಕಾಪಾಡಲು, ಕಾವೇರಿ ನೀರು ಸರಬರಾಜು ಆಗುವ ಪ್ರದೇಶಗಳಲ್ಲಿ, BWSSB ಬೋರೆವೆಲ್‌ಗಳನ್ನು ಕೊರೆಯುವುದಕ್ಕೆ ಅನುಮತಿ ನೀಡಬಾರದೆಂದು ನಿರ್ಧರಿಸಿದೆ.
ಬದಲಿ ನೀರಿನ ಮೂಲಗಳೆಂದರೆ ಕೆರೆಗಳು. ಇತ್ತೀಚಿನ ವರದಿಯ ಪ್ರಕಾರ, ಬೆಂಗಳೂರಿನ 105 ಕೆರೆಗಳಲ್ಲಿ, ಕೇವಲ 4 ಸುಸ್ಥಿತಿಯಲ್ಲಿವೆ. ಉಳಿದವು ಮಲಿನಗೊಂಡಿವೆ ಅಥವಾ ಬತ್ತಿವೆ ಅಥವಾ ಒತ್ತುವರಿ ಆಗಿವೆ.
ಹಾಗಾಗಿ ಉಳಿದದ್ದು ಒಂದೇ – ಮಳೆನೀರು. ಹಾಗಾದರೆ ಮಳೆ ನೀರು ಸಂಗ್ರಹಿಸುವ ಈ ಸರಳ, ಹಳೆಯ ಕಾಲದ ಪರಿಕಲ್ಪನೆ ಬೆಂಗಳೂರಿನ ನೀರಿನ ಸಮಸ್ಯೆಯನ್ನು ಪರಿಹರಿಸುವುದೇ?
ನಮ್ಮ ದಾಹವನ್ನು ನೀಗಿಸುವ ಮಳೆನೀರು
ತಜ್ಞರ ಪ್ರಕಾರ, ನೀರಿನ ಸಮಸ್ಯೆಯನ್ನು ಬಗೆಹರಿಸಿ, ಕೊರತೆಯನ್ನು ನೀಗಿಸಬಹುದಾದ ಶಕ್ತಿ ಬೆಂಗಳೂರಿನ ಜನರಿಗಿದೆ. ಮಳೆ ನೀರು ಕೊಯ್ಲು ಮಾಡುವುದರಿಂದ ಮಾತ್ರ ಇದು ಸಾಧ್ಯವಾಗುತ್ತದೆ. ಆದರೆ ಇದಕ್ಕೆ 19 ಲಕ್ಷ ಕಟ್ಟಡಗಳ ಸಹಕಾರ ಬೇಕಾಗಿದೆ.
ಮಳೆ ನೀರಿನ ಕೊಯ್ಲು ಹೊಸ ವಿಷಯವೇನಲ್ಲ. ಮಳೆಯ ನೀರನ್ನು ಸಂಗ್ರಹಿಸುವುದೇ ಈ ಮಳೆ ನೀರಿನ ಕೊಯ್ಲು. ಈ ನೀರನ್ನು ಟ್ಯಾಂಕ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ ಅಥವಾ ನೆಲದಡಿಯ ಸಂಪ್‌ಗಳಿಗೆ ಹರಿಸಲಾಗುತ್ತದೆ. ಮುಖ್ಯವಾಗಿ, ಮಳೆ ನೀರು ಹರಿದು ಪೋಲಾಗದಂತೆ ಮಾಡುವುದೇ ಇದರ ಉದ್ದೇಶ.
ಕೆಲವು ಮಳೆ ನೀರು ಕೊಯ್ಲು ವಿಧಾನಗಳು
ಮಳೆ ನೀರನ್ನು ಸಂಗ್ರಹಿಸುವ ಮುಖ್ಯವಾದ ದಾರಿಗಳು:
ಮನೆಯ ಮಾಳಿಗೆಯ ಕೊಯ್ಲು
ಮನೆಯ ಮಾಳಿಗೆ ಮೇಲೆ ಬೀಳುವ ಮಳೆ ನೀರು ಹರಿದು ಚರಂಡಿ ಸೇರುತ್ತದೆ. ಈ ನೀರನ್ನು , ನೆಲದಡಿಯ ಟ್ಯಾಂಕ್ ಗಳಲ್ಲಿ ಸಂಗ್ರಹಿಸಿ ಇಡಬಹುದು. ದಿನನಿತ್ಯದ ಬಳಕೆಗೆ ಈ ನೀರನ್ನು ಬಳಸಬಹುದು. ಸಂಗ್ರಹಿಸಲು ಆಗದ ಹೆಚ್ಚಾದ ನೀರು ಅಂತರ್ಜಲ ಮಟ್ಟವನ್ನು ಹೆಚ್ಚಿಸುತ್ತದೆ. ಹೆಚ್ಚಿನ ಸಮಯದಲ್ಲಿ, ಈ ನೀರು ಒಳ್ಳೆಯ ಗುಣಮಟ್ಟದ್ದಾಗಿರುತ್ತದೆ ಮತ್ತು ಉಪಯೋಗಿಸಲು ಯೋಗ್ಯವಾಗಿರುತ್ತದೆ. ಬಹಳಷ್ಟು ಕಟ್ಟಡಗಳಲ್ಲಿ ಮಾಳಿಗೆ ಚಿಕ್ಕದಿದ್ದರೂ, ಈ ಮಾಳಿಗೆಯ ಕೊಯ್ಲಿಗೆ ಸೂಕ್ತವಾಗಿದೆ.
ಮೇಲ್ಮೈ ನೀರಿನ / ಹೊರ ನೀರಿನ ಕೊಯ್ಲು
ಕೆರೆ, ಹೊಂಡಗಳನ್ನು ಬಳಸಿ ಮಳೆ ನೀರನ್ನು ಹೇಗೆ ಸಂಗ್ರಹಿಸಬೇಕು ಎಂಬ ವಿಷಯವಿದು. ಈ ಜಲ ಮೂಲಗಳು ಮಳೆಯ ನಂತರ ಹರಿಯುವ ನೀರನ್ನು ತಡೆಯುತ್ತದೆ. ಮತ್ತೆ, ಈ ನೀರು ದಿನ ನಿತ್ಯದ ಬಳಕೆಗೆ ಯೋಗ್ಯವಾದುದು ಮತ್ತು ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದು. ಆದರೆ, ಆವಿಯಾಗುವುದನ್ನು ತಡೆಯುವುದೇ ಒಂದು ಸಮಸ್ಯೆ. ಜಾಗತಿಕ ತಾಪಮಾನ ಹೆಚ್ಚುತ್ತಿದ್ದಂತೆ, ಆವಿಯಾಗುವುದರಿಂದ ಹೆಚ್ಚು ನಷ್ಟ ಆಗಬಹುದು.
ಅಂತರ್ಜಲ ಮರುಪೂರಣ
ನೀರಿನ ಸಮಸ್ಯೆಯ ಹಿನ್ನಲೆಯಲ್ಲಿ , ಎಲ್ಲಾ ಬೆಂಗಳೂರಿಗರಿಗೆ ಅಂತರ್ಜಲ ಹೆಚ್ಚಿಸುವುದು ಮೊದಲ ಆದ್ಯತೆ ಆಗಬೇಕು. ಇಂಫಿಲ್ಟ್ರೇಶನ್ ಬೇಸಿನ್‌ಗಳು, ಟ್ರೆಂಚ್‌ಗಳು ಮತ್ತು ಇಂಜೆಕ್ಷನ್ ಬಾವಿಗಳಂತಹ ವಿಧಾನಗಳಿಂದ ಸಹಾಯವಾಗುತ್ತದೆ. ಕಟ್ಟು ನಿಟ್ಟಾದ ನಿಯಮಗಳ ಜೊತೆಗೆ, ಇದರ ಬಗ್ಗೆ ಶಿಕ್ಷಣ ಮತ್ತು ಜಾಗೃತಿ ಮೂಡಿಸಿದರೆ ಸಹಾಯವಾಗುತ್ತದೆ.
ಒಂದು ಸ್ಪೂರ್ತಿದಾಯಕ ಕಥೆ
ಏ.ಆರ್.ಶಿವಕುಮಾರ್ ಭಾರತೀಯ ವಿಜ್ಞಾನ ಸಂಸ್ಥೆಯ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನದ ಕೌನ್ಸಿಲ್ ನಲ್ಲಿ ವಿಜ್ಞಾನಿಯಾಗಿದ್ದಾರೆ. ವಿಜಯನಗರದಲ್ಲಿ ಅವರ ಮನೆಯನ್ನು 60 X 40 ನಿವೇಶನದಲ್ಲಿ ಕಟ್ಟಲಾಗಿದೆ. ಇವರು 23 ವರ್ಷಗಳಿಂದ BWSSB ಬಿಲ್ ಅನ್ನು ಕಟ್ಟಿಲ್ಲ. ಇಲ್ಲ, ಇವರು ಬಿಲ್ ಕಟ್ಟದೆ BWSSB ಯ ತಪ್ಪಿತಸ್ಥರ ಪಟ್ಟಿಯಲ್ಲೂ ಇಲ್ಲ.
ಬದಲಾಗಿ, ಮಳೆ ನೀರಿನ ಕೊಯ್ಲನ್ನು ಸಮರ್ಥವಾಗಿ ಬಳಸುವಲ್ಲಿ ನಿಸ್ಸೀಮರು. ಮಳೆ ನೀರನ್ನೇ ಅಷ್ಟು ಚೆನ್ನಾಗಿ ಬಳಸುವುದರಿಂದ, ಅವರಿಗೆ ಬೇರೆ ನೀರಿನ ಸರಬರಾಜು ಬೇಡವೇ ಬೇಡ. ಅವರು 2 ನೆಲದಡಿಯ ತೊಟ್ಟಿಗಳನ್ನು ಕಟ್ಟಿದ್ದಾರೆ ಮತ್ತು ಮಾಳಿಗೆಯ ಮೇಲೆ ಎರಡು ಟ್ಯಾಂಕ್‌ಗಳಿವೆ. ಇವೆಲ್ಲದರಲ್ಲಿ ಒಟ್ಟು 45000 ಲೀಟರ್ ಮಳೆನೀರನ್ನು ಸಂಗ್ರಹಿಸುತ್ತಾರೆ. ಇದರ ಜೊತೆ, ಸಂಗ್ರಹಿಸಿದ ನೀರನ್ನು ಸರಿಯಾಗಿ ಬಳಸುವುದಕ್ಕೆ, ಇವರು ಗ್ರೇಯ್ ವಾಟೆರ್ ಮರುಬಳಕೆ ವ್ಯವಸ್ಥೆಯನ್ನು ಉಪಯೋಗಿಸುತ್ತಾರೆ.
ಇದೊಂದು ಸ್ಪೂರ್ತಿದಾಯಕ ಕಥೆ, ಮುಖ್ಯವಾಗಿ ಬೆಂಗಳೂರು 2020 ರ ಸಮಯಕ್ಕೆ ನೀರು ಇಲ್ಲದಂತೆ ಆಗುತ್ತದೆ ಎಂಬ ಸುದ್ದಿ ಪ್ರತಿದಿನ ಬರುತ್ತಿರುವುದರಿಂದ. ಈ ಭವಿಷ್ಯವಾಣಿಯನ್ನು ಸುಳ್ಳಾಗಿಸಲು, ಶಿವಕುಮಾರ್ ಅಂತಹವರಿಂದ ಪ್ರೇರಿತರಾಗಬೇಕು. ಮಳೆ ನೀರಿನ ಕೊಯ್ಲನ್ನು ಮಾಡಬೇಕು.
ಇದೆ ಸರಿಯಾದ ಸಮಯ
ಚೆನ್ನೈ ನಗರವು ನೀರಿನ ಬಿಕ್ಕಟ್ಟನ್ನು ನೋಡಿದೆ. ನಗರವಾಸಿಗಳಿಗೆ ತೀವ್ರ ಸಮಸ್ಯೆಗಳಾಗಿವೆ. ಹಲವಾರು ವ್ಯಾಪಾರ ಕೇಂದ್ರಗಳನ್ನು ಮುಚ್ಚಬೇಕಾಯಿತು.
ಬೆಂಗಳೂರಿನಲ್ಲಿ ಇಂತಹ ಪರಿಸ್ಥಿತಿಯನ್ನು ನಾವು ತಡೆಯಬೇಕೆಂದರೆ, ಎಚ್ಚೆತ್ತುಕೊಳ್ಳಲು ಇದೆ ಸೂಕ್ತ ಸಮಯ.

ಮುಂದಿನ ಪೀಳಿಗೆಯವರು ಬಳಲುವಂತೆ , ಇಂದು ನಾವು ಇರುವುದು ಬೇಡ. ಎಚ್ಚೆತ್ತುಕೊಳ್ಳೋಣ ಮತ್ತು ಉತ್ತಮವಾದ ನಾಳೆಗೆ ಕೆಲಸ ಮಾಡೋಣ.




Leave a Reply